ನರಿ
ಒಂದು ಮಾಂಸಾಹರಿ ಸ್ತನಿ (ಫಾಕ್ಸ್). ನಾಯಿಗಳ ಹತ್ತಿರ ಸಂಬಂಧಿ. ಕ್ಯಾನಿಡೀ ಕುಟುಂಬಕ್ಕೆ ಸೇರಿದೆ. ವಲ್ಪೆಸ್, ಫೆನೆಕಸ್, ಆಲೊಪೆಕ್ಸ್ ಮತ್ತು ಓಟೋಸಿಯಾನ್ ಎಂಬವು ನರಿಗಳ ಮುಖ್ಯ ಜಾತಿಗಳು. ನರಿ ಎಂಬ ಪದ ಈ ಎಲ್ಲ ಜಾತಿಗಳಿಗೂ ಅನ್ವಯಿಸುವುದು. ವಲ್ಪೆಸ್ ಕೆಂಪುನರಿಗಳಿಗಿರುವ ಹೆಸರು. ಎಲ್ಲ ಕಡೆಯಲ್ಲೂ ಹೆಚ್ಚಾಗಿ ಕಂಡುಬರುವ ಕೆಂಪುನರಿಯನ್ನೇ ಮಾದರಿಯನ್ನಾಗಿ ತೆಗೆದುಕೊಳ್ಳಲಾಗಿದೆ.

ಕೆಂಪುನರಿ ಭೌಗೋಳಿಕವಾಗಿ ಎಲ್ಲ ಕಡೆಗಳಲ್ಲೂ ವ್ಯಾಪಿಸಿದೆ. ಯೂರೋಪಿನ ಎಲ್ಲ ಪ್ರದೇಶಗಳಲ್ಲಿ, ಏಷ್ಯದ ಸಮಶೀತೋಷ್ಣವಲಯಗಳಲ್ಲಿ, ಆಫ್ರಿಕದ ಸಹರಾದ ಮರುಭೂಮಿಯ ಉತ್ತರದಲ್ಲಿ, ಅಮೆರಿಕೆಯ ಕೆಲವು ಕಡೆಗಳಲ್ಲಿ ಇದು ಕಾಣಬರುವುದು. ಇಲ್ಲಿನ ಕೆಂಪುನರಿಗಳ ನಡುವೆ ಕೆಲವು ವ್ಯತ್ಯಾಸಗಳಿವೆಯಾದರೂ ಇವುಗಳ ರಚನೆ ಮತ್ತು ನಡವಳಿಕೆಯಲ್ಲಿ ಬಹಳ ಸಾಮ್ಯತೆ ಉಂಟು. ಹೊಲಗದ್ದೆಗಳಲ್ಲೊ ಕಾಡುಗಳಲ್ಲೊ ಬಿಲಗಳನ್ನು ರಚಿಸಿಕೊಂಡು ವಾಸಿಸುತ್ತವೆ. ಹೊಲಗದ್ದೆಗಳ ಸುತ್ತಲಿನ ಕಳೆಗಿಡಗಳಿಂದ ಕೂಡಿದ ಅಂಚಿನ ಪ್ರದೇಶಗಳಲ್ಲಿ ವಿಶೇಷವಾಗಿ ಕಾಣಸಿಗುವುವು. ಆಗಾಗ ದಟ್ಟವಾದ ಕಾಡು, ಜೌಗುಪ್ರದೇಶದ ಅಂಚು ಹಾಗೂ ಪಟ್ಟಣ ಪ್ರದೇಶಗಳ ಸಮೀಪದಲ್ಲಿ ಕಂಡುಬರುವುದುಂಟು.

ಕೆಂಪುನರಿಯ ಉದ್ದ ಸುಮಾರು 1-1.3 ಮೀಟರ್ (ಸುಮಾರು 35 ಸೆಂ.ಮೀ. ಉದ್ದದ ಬಾಲವೂ ಸೇರಿ); ಭುಜದ ಬಳಿಯ ಎತ್ತರ ಸುಮಾರು 40 ಸೆಂಮೀ; ತೂಕ 5-9 ಕೆಜಿ. ಬಾಲ ಪೊದೆಯಂತಿದೆ. ಚರ್ಮದ ಮೇಲೆ ದಟ್ಟವಾದ ಕೂದಲುಗಳ ಹೊದಿಕೆಯುಂಟು. ಕೂದಲುಗಳಲ್ಲಿ ಎರಡು ವಿಧ: ದೇಹವನ್ನು ರಕ್ಷಿಸುವ ನೀಳಕೂದಲು ಮತ್ತು ಮೃದುವಾದ ಉತ್ತಮ ದರ್ಜೆಯ ತುಪ್ಪುಳು ಕೂದಲು. ಕೂದಲಿನ ಬಣ್ಣ ದಟ್ಟ ಕೆಂಪು. ಕೆಂಪುನರಿ ಇತರ ನರಿಗಳಿಗಿಂತ ಎರಡು ರೀತಿಯಲ್ಲಿ ಭಿನ್ನವಾಗಿದೆ. ಇದರ ಬಾಲದ ತುದಿ ಬಿಳಿ ಮತ್ತು ಇದರ ಕಿವಿಯ ಹೊರಭಾಗ ಕಪ್ಪು ಬಣ್ಣದ್ದು.

ಕೆಂಪುನರಿಯ ಬಿಲ ಒಂದು ಸಾಮಾನ್ಯ ಕುಳಿ. ಹಗಲೆಲ್ಲ ಇದರಲ್ಲಿ ಅವಿತಿಟ್ಟುಕೊಂಡಿದ್ದು ರಾತ್ರಿ ಬೇಟೆಗೆ ಹೊರಡುತ್ತದೆ. ಹೊಲದಿಲಿ, ಮೊಲ ಮುಂತಾದ ಚಿಕ್ಕ ಸ್ತನಿಗಳು ನರಿಯ ಮುಖ್ಯ ಆಹಾರ. ಹಕ್ಕಿಗಳನ್ನು ಮತ್ತು ಹಕ್ಕಿಗಳ ಮೊಟ್ಟೆಗಳನ್ನು ತಿನ್ನುತ್ತದೆ. ಹಣ್ಣು, ಕಬ್ಬು ಎಂದರೂ ಇದಕ್ಕೆ ಮೆಚ್ಚು. ಮೊಲಕ್ಕಿಂತ ದೊಡ್ಡ ಗಾತ್ರದ ಪ್ರಾಣಿಯನ್ನು ಕೆಂಪು ನರಿ ಕೊಲ್ಲಲಾರದು. ಆದರೂ ಜಿಂಕೆಮರಿ ಮತ್ತು ಇತರ ದೊಡ್ಡ ಪ್ರಾಣಿಗಳ ಅವಶೇಷಗಳು ನರಿಯ ಬಿಲದ ಸುತ್ತಲೂ ಬಿದ್ದಿರುವುದುಂಟು. ಬಹುಶಃ ಬೇರೆ ಪ್ರಾಣಿಗಳು ಕೊಂದು ತಿಂದು ಬಿಟ್ಟ ಕೊಳೆತ ಮಾಂಸವನ್ನು ಇದು ತಿನ್ನುತ್ತದೆ. ಇದರ ಕಣ್ಣು, ಕಿವಿ ಮತ್ತು ಮೂಗು ತೀಕ್ಷ್ಣವಾಗಿದ್ದು ಆಹಾರವನ್ನು ಪತ್ತೆಹಚ್ಚಲು ಸಹಾಯಕವಾಗಿವೆ. ನರಿ ತುಂಬ ಎಚ್ಚರಿಕೆಯಿಂದ ಹಾಗೂ ಜಾಣ್ಮೆಯಿಂದ, ಸುಳಿವು ಕೊಡದೆ ಮರೆಯಿಂದ ಎದೆಯ ಮೇಲೆ ಎರಗುತ್ತದೆ. ಯುಕ್ತಿಗೆ ಮತ್ತು ಕುಶಲತೆಗೆ ನರಿ ಹೆಸರುವಾಸಿ. ಬೇಟೆನಾಯಿಗಳು ಅಟ್ಟಿಸಿಕೊಂಡು ಬಂದಾಗ ಅಥವಾ ಬೋನಿಗೆ ಸಿಕ್ಕಿ ಬಿದ್ದಾಗ ನರಿ ಎಲ್ಲ ರೀತಿಯ ಉಪಾಯಗಳನ್ನು ಬಳಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ. ನರಿ ನಡೆಯುವ ಭಂಗಿ ಮಂದಗತಿಯದು. ಆದರೆ ಶತ್ರುಗಳು ಅಟ್ಟಿಸಿಕೊಂಡು ಬಂದಾಗ ನಿರಾಯಾಸವಾಗಿ ನೆಗೆಯುತ್ತ ಬೇಟೆನಾಯಿಯಂತೆ ವೇಗವಾಗಿ ಓಡುತ್ತದೆ.

ನರಿ ಸಾಮಾನ್ಯವಾಗಿ ಒಂಟಿಜೀವಿ. ಸಂತಾನಾಭಿವೃದ್ಧಿ ಕಾಲದಲ್ಲಿ ಮಾತ್ರ ಹೆಣ್ಣು ಮತ್ತು ಗಂಡುಗಳು ಜೊತೆಯಾಗಿರುತ್ತವೆ. ಸಂತಾನಾಭಿವೃದ್ಧಿಕಾರ್ಯ ಚಳಿಗಾಲದಲ್ಲಿ ನಡೆಯುತ್ತದೆ. ಗರ್ಭಾವಸ್ಥೆಯ ಅವಧಿ 49-55 ದಿವಸಗಳು. ಒಂದು ಬಾರಿಗೆ ಒಂದರಿಂದ ಹತ್ತು ಮರಿಗಳು ಹುಟ್ಟುವುವು. ಆಗತಾನೇ ಹುಟ್ಟಿದ ಮರಿಗಳು ದುರ್ಬಲವಾಗಿರುವುವು. ಜೊತೆಗೆ ಇವಕ್ಕೆ ಕಣ್ಣು ಕಾಣಿಸುವುದಿಲ್ಲ. ಸುಮಾರು ಐದು ವಾರಗಳವರೆಗೆ ಬಿಲದಲ್ಲಿಯೇ ಇರುವುವು. ಆ ಕಾಲದಲ್ಲಿ ಗಂಡು ನರಿ ಅವಕ್ಕೆ ಆಹಾರವನ್ನು ತಂದುಕೊಡುತ್ತದೆ. ಬಿಲದಿಂದ ಹೊರಬಂದಾಗ ಮರಿಗಳು ಸ್ವತಂತ್ರ ಜೀವನ ನಡೆಸಲು ಸಮರ್ಥವಾಗಿರುವುವು.

ಒಂದು ಕಾಲದಲ್ಲಿ ಹದಗೊಳಿಸಿದ ನರಿಚರ್ಮಕ್ಕೆ ವಿಶೇಷ ಬೇಡಿಕೆಯಿತ್ತಾಗಿ ಇದರ ಚರ್ಮವನ್ನು ಹದಮಾಡುವ ಉದ್ಯಮ ಲಾಭದಾಯಕ ಉದ್ಯಮವೆನಿಸಿತ್ತು. ನರಿಯ ಶ್ರೇಷ್ಠ ತಳಿಗಳ ಅಭಿವೃದ್ಧಿಗೆಂದೇ ಅನೇಕ ನರಿ ಸಂಗೋಪನಾ ಸಂಸ್ಥೆಗಳು ಅಸ್ತಿತ್ವದಲ್ಲಿದ್ದವು. 1910ರಲ್ಲಿ ಒಂದು ಜೊತೆ ಬೆಳ್ಳಿನರಿಯ (ಸಿಲ್ವರ್ ಫಾಕ್ಸ್) ಚರ್ಮದ ಬೆಲೆ 3,000 ಡಾಲರ್‍ಗಳಾಗಿತ್ತು; 1913ರಲ್ಲಿ ಅದು 35,000 ಡಾಲರುಗಳಿಗೆ ಏರಿತು. ಹದಮಾಡಿದ ನರಿ ಚರ್ಮದ ತಯಾರಿಕೆಯ ಉದ್ಯಮ 1939ರಲ್ಲಿ ಗರಿಷ್ಠ ಮಟ್ಟವನ್ನು ಮುಟ್ಟಿತು. ಆಗ ಅಮೆರಿಕ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಸುಮಾರು 350,000 ಬೆಳ್ಳಿನರಿಯ ಚರ್ಮದ ತಯಾರಿಕೆ ನಡೆಯಿತು. ಜೊತೆಗೆ ನೀಲಿನರಿಯ (ಬ್ಲೂ ಫಾಕ್ಸ್) ಚರ್ಮದ ಕೈಗಾರಿಕೆಯೂ ಜನಪ್ರಿಯವಾಗಿತ್ತು. ಅಮೆರಿಕದ ವಿಸ್ಕಾನ್ಸಿನ್ ಒಂದರಲ್ಲಿಯೇ ಒಟ್ಟು ಉತ್ಪನ್ನದ ಸುಮಾರು 1/3ನೇ ಭಾಗದಷ್ಟು ತಯಾರಿಕೆ ನಡೆಯುತ್ತಿತ್ತು. ಆದರೆ 1939ರಿಂದ ಈಚೆಗೆ ಬೇಡಿಕೆ ಇಳಿಮುಖವಾಗತೊಡಗಿ 1950ರ ದಶಕದಲ್ಲಿ ಕೇವಲ 10,000 ಬೆಳ್ಳಿನರಿಯ ಚರ್ಮದ ಉತ್ಪಾದನೆ ನಡೆಯಿತು. ಜನರ ಒಲವು ಮಿಂಕ್ ಮತ್ತು ಚಿಂಚಿಲಗಳ ಚರ್ಮದತ್ತ ಹರಿದುದೇ ಈ ಇಳಿತಕ್ಕೆ ಕಾರಣ.

ನರಿ ಒಂದು ಪಿಡುಗೂ ಹೌದು. ಕೋಳಿಸಾಕಣೆ ಕೇಂದ್ರಗಳ ಮೇಲೆ ದಾಳಿಯಿಕ್ಕಿ ಅಪಾರ ಹಾನಿಯನ್ನು ಉಂಟುಮಾಡುತ್ತದೆ. ಕಬ್ಬಿನ ಗದ್ದೆಗಳಿಗೆ ದಾಳಿ ಇಡುತ್ತದೆ. ಆದರೂ ಮನುಷ್ಯನಿಗೆ ಹಾನಿಕಾರಕಗಳಾದ ದಂಶಕಗಳನ್ನು ಹತೋಟಿಯಲ್ಲಿ ಇಡುವುದರಲ್ಲಿ ನರಿ ಪ್ರಮುಖಪಾತ್ರ ವಹಿಸುತ್ತದೆ. ನರಿಯ ಬೇಟೆ ಇಂಗ್ಲೆಂಡ್ ಮತ್ತು ಸಂಯುಕ್ತ ಸಂಸ್ಥಾನಗಳಲ್ಲಿ ಒಂದು ಪ್ರಮುಖ ಕ್ರೀಡೆಯಾಗಿತ್ತು.

ನರಿಯ ಮುಖ್ಯ ಬಗೆಗಳು. 1. ವಲ್ಪೆಸ್ ವಲ್ಪೆಸ್ (ಕೆಂಪುನರಿ): ಭಾರತ, ಉತ್ತರ ಆಫ್ರಿಕ, ಸಂಯುಕ್ತ ಸಂಸ್ಥಾನ ದಕ್ಷಿಣ ಭಾಗದಲ್ಲಿ ಕಂಡುಬರುತ್ತದೆ ನಿಶಾಚರಿ.

    2. ವಲ್ಪೆಸ್ ಫಲ್ವ: ಉತ್ತರ ಅಮೆರಿಕದ ಮೆಕ್ಸಿಕೋದ ಉತ್ತರ ಭಾಗದ ನಿವಾಸಿ.
    3. ವ. ಫೆರ್ರಿಲೇಟ (ಟಿಬೆಟ್ಟಿನ ಮರಳನರಿ): ಹಳದಿಬಣ್ಣದ್ದು. ಕಿವಿಗಳು ಚಿಕ್ಕವು. ಟಿಬೆಟ್ ಮತ್ತು ನೇಪಾಳದಲ್ಲಿ ವಾಸಿಸುತ್ತದೆ.
    4. ವ. ಬೆಂಗಾಲೆನ್ಸಿಸ್ (ಬಂಗಾಳದ ನರಿ): ಭಾರತ ಮತ್ತು ನೇಪಾಳದಲ್ಲಿ ಉಂಟು.
    5. ವ.ಚಾಮ (ಚಾಮನರಿ). ಚಿಕ್ಕಗಾತ್ರದ ನರಿ; ಕಂದುಬಣ್ಣದ್ದು; ಉದ್ದ ಕಿವಿಯುಳ್ಳದ್ದು.
    6. ಫೆನೆಕ್ಸ್ ಜೆರ್ಡ (ಫೆನೆಕ್ ನರಿ): ಅಗಲ ಕಿವಿ ಉಳ್ಳದ್ದು. ನರಿಗಳಲ್ಲೆ ಅತ್ಯಂತ ಚಿಕ್ಕಗಾತ್ರದ್ದು. ಉತ್ತರ ಆಫ್ರಿಕದ ಸೂಡಾನ್‍ವರೆಗೂ ಹರಡಿರುವ ಮರುಭೂಮಿಯಲ್ಲಿ ಕಾಣದೊರೆಯುತ್ತದೆ.
    7. ಯೂರೊಸಿಯಾನ್ ಸಿನರಿಯರ್ಜೆಂಟಿಯಸ್: ಅಮೆರಿಕ ಕಂದುಬಣ್ಣದ ನರಿ. ಜೌಗುಪ್ರದೇಶ, ದಟ್ಟಕಾಡುಗಳಲ್ಲಿ ವಾಸಿಸುತ್ತದೆ. ಕೆಂಪುನರಿಯಲ್ಲಿರುವ ಚಾಣಾಕ್ಷತನ ಇದರಲ್ಲಿಲ್ಲ. ಇದು ಮರವನ್ನು ಹತ್ತಬಲ್ಲ ಏಕಮಾತ್ರ ನರಿ.
    8. ಆಲೊಪೆಕ್ಸ್: ಧ್ರುವಪ್ರದೇಶದ ನರಿ. ಚಿಕ್ಕಗಾತ್ರದ್ದು, ಬೇಸಿಗೆಯಲ್ಲಿ ಕಂದುಬಣ್ಣವನ್ನು ಚಳಿಗಾಲದಲ್ಲಿ ಬಿಳಿಬಣ್ಣವನ್ನು ತಳೆಯುತ್ತದೆ.
    9. ಓಟೋಸಿಯಾನ್ ಮೆಗಲೋಟಿಸ್: ಆಫ್ರಿಕದ ದೊಡ್ಡ ಕಿವಿಯ ನರಿ. ಕಂದು ಬಣ್ಣದ್ದು. ಕಾಲುಗಳು ಕಪ್ಪುಬಣ್ಣಕ್ಕಿವೆ. ಕೆಂಪುನರಿಯ ಗಾತ್ರದ್ದು ಇದು. ಕೇನಿಡೀ ಕುಟುಂಬದ ಉಳಿದೆಲ್ಲ ಜಾತಿಯ ಪ್ರಾಣಿಗಳಲ್ಲೂ ಇರುವ ಕತ್ತರಿಸುವ ದವಡೆಹಲ್ಲುಗಳು ಈ ಪ್ರಭೇದದಲ್ಲಿ ಇಲ್ಲದಿರುವುದು ಇದರ ವಿಚಿತ್ರ ಲಕ್ಷಣ.
(ಬಿ.ಕೆ.ಜೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ